ಜಲಾಶಯ -
ಜೀವನದಿಯೊಂದಕ್ಕೆ ಅಡ್ಡವಾಗಿ ಕಟ್ಟೆಯನ್ನು ಕಟ್ಟಿದಾಗ ಮೇಲುಭಾಗದಲ್ಲಿ ಸಂಗ್ರಹಗೊಳ್ಳುವ ನೀರಿನ ರಾಶಿ (ರಿಸರ್ವಾಯರ್) ರೂಢಿಯಲ್ಲಿ ಯಾವುದೇ ದೊಡ್ಡ ಗಾತ್ರದ ನೀರಿನ ಸಂಗ್ರಹಕ್ಕೂ ಈ ಹೆಸರುಂಟು. ಉದಾಹರಣೆಗೆ : ನರಗಕ್ಕೆ ನೀರು ಸರಬರಾಜು ಮಾಡಲು ಒಂದೆಡೆ ದಾಸ್ತಾನಿಸಿರುವ ನೀರಿನ ರಾಶಿ. ಹರಿವ ಹೊಳೆಗೆ ಅಡ್ಡ ಕಟ್ಟೆಯನ್ನು ಕಟ್ಟಿದಾಗ ಉಂಟಾಗುವ ನೈಸರ್ಗಿಕ ಜಲಾಶಯದ ನೀರನ್ನು ನೀರಾವರಿ ಕಾರ್ಯ, ಕುಡಿವ ನೀರಿನ ಸರಬರಾಜು, ವಿದ್ಯುದುತ್ಪಾನೆ, ಪ್ರವಾಹನಿಯಂತ್ರಣ ಇವೇ ಮೊದಲಾದ ಬೇರೆ-ಬೇರೆ ಉದ್ದೇಶಗಳಿಗೆ ವಿನಿಯೋಗಿಸುತ್ತಾರೆ. ಜಲಾಶಯದಿಂದ ಹೆಚ್ಚಿನ ಉಪಯುಕ್ತತೆ ಇರುವುದು ನಿಜವಾದರೂ ದೀರ್ಘಕಾಲದಲ್ಲಿ ಕೆಲವು ತೊಂದರೆಗಳು ಸಂಭವಿಸುವುದೂ ಉಂಟು. ಸ್ಥಳೀಯ ಪರಿಸರದ ಮೇಲೆ ಜಲಾಶಯ ಗಮನಾರ್ಹ ಪ್ರಭಾವ ಬೀರಿ ಹೊಸ ಸಮಸ್ಯೆಗಳು ಉದ್ಭವಿಸಲು ಕಾರಣವಾಗಬಹುದು. ಅದೇ ವೇಳೆ ಕೆಳಗಿನ ಪ್ರದೇಶಗಳಲ್ಲಿ ನೀರಿನ ಹರಿವು ಮೊದಲಿದ್ದುದಕ್ಕಿಂತ ಬಲು ಕಡಿಮೆ ಆಗುವುದರಿಂದ ಅಲ್ಲಿನ ಪರಿಸರದಲ್ಲಿ ಬೇರೆ ಸಮಸ್ಯೆಗಳು ತಲೆದೋರಬಹುದು. 

ಕ್ರಿ.ಪೂ. 3000ದಷ್ಟು ಹಿಂದೆ ಮೆಸೊಪೆÇಟೇಮಿಯದಲ್ಲಿ ನದಿಗಳಿಗೆ ಅಡ್ಡ ಮಣ್ಣಿನ ಕಟ್ಟೆಗಳನ್ನು ಕಟ್ಟಿ ಜಲಾಶಯಗಳನ್ನು ನಿರ್ಮಿಸಿ ನಾಲೆಗಳಿಂದ ನೀರನ್ನು ಗದ್ದೆಗಳಿಗೆ ಹಾಯಿಸುತ್ತಿದ್ದರು. ಆ ಮೇಲೆ ಬಂದ ಬ್ಯಾಬಿಲೋನಿಯರು ಟೈಗ್ರಿಸ್ ನದಿಗೆ ಅಡ್ಡ ಹಾಕಿದ ಮಣ್ಣಿನ ಕಟ್ಟೆಯಿಂದ 4000' ಅಗಲ, 200 ಮೈಲು ಉದ್ದವಾದ ನಾಲೆಯನ್ನು ರಚಿಸಿದ್ದರು. ಪ್ರಾಚೀನ ಈಜಿಪ್ಟಿನಲ್ಲಿ ನೈಲ್ ನದಿಗೆ ಅಡ್ಡ ಬ್ಯಾರಾಜುಗಳನ್ನು ಕಟ್ಟಿ ನಾಲೆಗಳಿಂದ ನೀರನ್ನು ವಿಶಾಲವಾದ ಮತ್ತು ಫಲವತ್ತಾದ ಬಯಲುಗಳಿಗೆ ಸಾಗಿಸಿದ್ದರು. 1902ರಲ್ಲಿ ಈ ನದಿಗೆ ಅಡ್ಡ ಆಸ್ವಾನ್ ಕಟ್ಟೆಯನ್ನು ನಿರ್ಮಿಸಿದರು. ಈಚೆಗೆ ಎಚ್ಚತ್ತ ಈಜಿಪ್ಟಿನಲ್ಲಿ ಆಧುನಿಕ ಆಸ್ವಾನ್ ಕಟ್ಟೆಯ ನಿರ್ಮಾಣವಾಗಿದೆ. ಕ್ರಿ.ಪೂ. 2205ರಷ್ಟು ಹಿಂದೆಯೇ ಚೀನಿಯರು ನದಿಗಳಿಗೆ ಏರಿಗಳನ್ನು ಕಟ್ಟಿ ಆಳವಾದ ನಾಲೆಗಳನ್ನು ತೋಡಿ ನೀರಾವರಿಯನ್ನು ಮಾಡುತ್ತಿದ್ದರು. ಅರೇಬಿಯದ ಮರುಭೂಮಿಯ ದೂರದ ಮೂಲೆಯಲ್ಲಿ ಕ್ರಿ.ಪೂ. 8ನೆಯ ಶತಮಾನದಲ್ಲಿ ಕಟ್ಟಿದ ಮಾಹಿಬ್ ಕಟ್ಟೆ ಗ್ರೀಕರಿಗೆ ತಿಳಿದಿದ್ದರೆ ಪ್ರಪಂಚದ ಕೌತುಕಗಳಲ್ಲಿ ಅದೂ ಒಂದಾಗಬಹುದಿತ್ತು. ಪ್ರಾಕ್ತನ ವಿಮರ್ಶಕರ ಕ್ರಮದಿಂದ ಅದು ಈಗ ಕಣ್ಣಿಗೆ ಬಿದ್ದಿದೆ, ಅದರಲ್ಲಿ ಗಾರೆಯೇ ಇಲ್ಲದೆ ಕಲ್ಲಿನ ತುಂಡುಗಳನ್ನು ನಯ ಮಾಡಿ ಜೋಡಿಸಿದ್ದಾರೆ. ಭಾರತದ ಪೆÇನೇರಿ ಕಟ್ಟೆಯ ಉದ್ದ 30 ಮೈಲು. ನೀರಹರಡು 80 ಚದರ ಮೈಲು. ಕ್ರಿ,ಪೂ, 5ನೆಯ ಶತಮಾನದಲ್ಲಿ ಶ್ರೀಲಂಕಾದಲ್ಲಿ ನಿರ್ಮಿಸಿದ ಪದವಿಲ್ ಸರೋವರದ ಏರಿಯ ಉದ್ದ 11 ಮೈಲು, ಎತ್ತರ 70 ಅಡಿ. ತಳದ ಅಗಲ 200 ಅಡಿ. ಮೇಲಿನ ಅಗಲ 30 ಅಡಿ. ಈ ಏರಿಯಲ್ಲಿ 17 ಮಿಲಿಯನ್ ಘನ ಗಜಮಣ್ಣು ಸೇರಿತ್ತು. ರಜಪುತಾಣದ ಅರಾವಳಿ ಬೆಟ್ಟಗಳಲ್ಲಿ 17ನೆಯ ಶತಮಾನದಲ್ಲಿ ಕಟ್ಟಿದ ಅಮೃತ ಶಿಲೆಯ ಎರಡು ಕಟ್ಟೆಗಳಲ್ಲಿ ವಾಸ್ತುಶಿಲ್ಪ ನೀರಾವರಿಯೊಂದಿಗೆ ಹಿತವಾಗಿ ಬೆರತಿದೆ. ರಾಜಾ ಜಯಸಿಂಹ ಒಂದು ಹೊಳೆಗೆ ಅಡ್ಡ 1000 ಅಡಿ ಉದ್ದವಾದ ಅಮೃತಶಿಲೆಯ ಕಟ್ಟೆಯನ್ನು ಕಟ್ಟಿಸಿ 90 ಮೈಲು ಸುತ್ತಳತೆಯುಳ್ಳ ಸರೋವರವನ್ನು ನಿರ್ಮಿಸಿದ್ದ. ಕಟ್ಟೆಯುದ್ದಕ್ಕೂ ನೀರಿನ ಕಡೆ ಅಮೃತಶಿಲೆಯ ಮೆಟ್ಟಿಲುಗಳಿವೆ. ಕಟ್ಟೆಯ ನೀರಿನಿಂದ ಮರುಭೂಮಿಯಲ್ಲಿ ಬತ್ತದ ಗದ್ದೆಗಳಾಗಿವೆ. ಆ ಮೇಲೆ ಬಂದ ರಾಜಾ ರಮಣಸಿಂಗ್ ಈ ಕಟ್ಟೆಗೆ 25 ಮೈಲು ದೂರದಲ್ಲಿ 3 ಮೈಲು ಉದ್ದವಾದ ಅಮೃತಶಿಲೆಯ ಕಟ್ಟೆಯನ್ನು ಅರ್ಧವೃತ್ತಾಕಾರವಾಗಿ ಕಟ್ಟಿ ಜಲಾಶಯವನ್ನು ನಿರ್ಮಿಸಿದ. ನೀರಿನ ಕಡೆ ಮೂರು ಸೋಪಾನಗಳಿವೆ. ಕರ್ನಾಟಕ ರಾಜ್ಯದಲ್ಲಿ 1898ರಲ್ಲಿ ಕೆ. ಶೇಷಾದ್ರಿ ಅಯ್ಯರ್‍ರವರ ದಿವಾನ ಗಿರಿಯಲ್ಲಿ ಮಾರಿಕಣಿವೆಯ ಕಟ್ಟೆ ಮತ್ತು ನಾಲೆಗಳು ನಿರ್ಮಾಣವಾದವು. 1911ರಲ್ಲಿ ಎಂ.ವಿಶ್ವೇಶ್ವರಯ್ಯನವರ ದಿವಾನಗಿರಿಯಲ್ಲಿ ಕಾವೇರಿ ನದಿಗೆ ಅಡ್ಡ ಕೃಷ್ಣರಾಜಸಾಗರದ ಕಟ್ಟೆಯ ಕೆಲಸ ಪ್ರಾರಂಭವಾಯಿತು. ಕೃಷ್ಣರಾಜಸಾಗರ ಮೈಸೂರು ನಗರದ ವಾಯುವ್ಯಕ್ಕೆ 12ಮೈಲು ದೂರದಲ್ಲಿದೆ. ಈ ಕಟ್ಟೆಯನ್ನು ಹೇಮಾವತಿ ಮತ್ತು ಲಕ್ಷ್ಮಣತೀರ್ಥ ನದಿಗಳು ಸೇರಿದ ಮೇಲೆ ಕಾವೇರಿ ನದಿಗೆ ಅಡ್ಡ ಕಟ್ಟಿದ್ದಾರೆ. ಜಲಾಶಯದ ಒಟ್ಟು ಜಲಾನಯನ ಭೂಮಿ 4,100 ಚದರ ಮೈಲು. ಇದರಿಂದ ವರ್ಷಕ್ಕೆ ಈ ಜಾಗದಲ್ಲಿ ಸರಾಸರಿ 55 ಲಕ್ಷ ಎಕರೆ-ಅಡಿ ನೀರು ಬರುತ್ತದೆ. 1924ರಲ್ಲಿ ಈ ಜಾಗದಲ್ಲಿ 28ಲಕ್ಷ ಕ್ಯುಸೆಕ್ಸ್‍ಗಳ ಮಹಾ ಪ್ರವಾಹ ಹರಿಯಿತು. ಈ ಜಲಾಶಯದಲ್ಲಿ ಒಟ್ಟು 4,833 ಕೋಟಿ ಘನ ಅಡಿ ನೀರು ಹಿಡಿಯುತ್ತದೆ. ಅದು ತುಂಬಿದಾಗ ಮೇಲುಗಡೆ ನದಿಯ ಪಾತ್ರದಲ್ಲಿ 500 ಚದರ ಮೈಲುಗಳಷ್ಟು ಹರಡಿರುತ್ತದೆ. ಸರೋವರದ ಸರಾಸರಿ ಉದ್ದ 15 ಮೈಲು ಅಗಲ 5 ಮೈಲು. 

	ಆಫ್ರಿಕದಲ್ಲಿ ವಿಕ್ಟೋರಿಯ ಜಲಪಾತದ ದಕ್ಷಿಣಕ್ಕೆ 300 ಮೈಲು ದೂರದಲ್ಲಿ 1956ರಲ್ಲಿ ಕಟ್ಟಲು ಪ್ರಾರಂಭಿಸಿ 1960ರಲ್ಲಿ ಮುಗಿಸಿದ ಕರಿಬ ಕಟ್ಟೆಯ ಹಿಂದಿನ ಸರೋವರ ಪ್ರಪಂಚದಲ್ಲಿಯೇ ಅತ್ಯಂತ ದೊಡ್ಡದು. ಇದರ ಗರಿಷ್ಟ ಎತ್ತರ 420 ಅಡಿ. ಮೇಲುಭಾಗದ ಉದ್ದ 1,900 ಅಡಿ. ಇದರ ಧಾರಣಸಾಮಥ್ರ್ಯ 130 ಮಿಲಿಯ ಎಕರೆ-ಅಡಿ, ಎಂದರೆ ಅಮೆರಿಕದ ನಾಲ್ಕು ಮೀಡ್ ಸರೋವರ ಮತ್ತು ಒಂದು ರೂಸ್‍ವೆಲ್ಟ್ ಸರೋವರಗಳ ಒಟ್ಟು ಧಾರಣಸಾಮಥ್ರ್ಯದಷ್ಟು. ಮೀಡ್ ಸರೋವರ ಕೆಳಗಿನ ಕಾಲೊರ್ಯಾಡೊ ನದಿಗೆ ಅಡ್ಡ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ಕಟ್ಟಿದ ಕಾಂಕ್ರೀಟಿನ ಹೂವರ್ ಕಟ್ಟೆಯ ಹಿಂದುಗಡೆ ಇದೆ. ಈ ಕಟ್ಟೆಯ ಎತ್ತರ 726 ಅಡಿ. ಥಿಯೋಡೋರ್ ರೂಸ್‍ವೆಲ್ಟ್ ಕಟ್ಟೆ ಅರಿಸೋನದಲ್ಲಿ ಸಾಲ್ಟ್ ನದಿಗೆ ಅಡ್ಡ 280 ಅಡಿ ಎತ್ತರವಾಗಿದೆ. ಕೆಳಗಿನ ಕಾಲೊರ್ಯಾಡೊ ನದಿಗೆ ಹೂವರ್ ಕಟ್ಟೆ ಹೇಗೋ ಹಾಗೆ ಮೇಲಿನ ಕಾಲೊರ್ಯಾಡೊ ನದಿಗೆ ಗ್ಲೆನ್ ಕ್ಯಾನನ್ ಕಟ್ಟೆಯಿದೆ. 1956ರಲ್ಲಿ ಪ್ರಾರಂಭವಾದ 760 ಮಿಲಿಯ ಡಾಲರುಗಳ ಯೋಜನೆಯಲ್ಲಿ 325 ಮಿಲಿಯ ಡಾಲರುಗಳ ಈ ಯೋಜನೆ ಮೊದಲನೆಯ ಭಾಗ. ಕಟ್ಟೆಯ ಎತ್ತರ 710 ಅಡಿ ಇದರ ಹಿಂಭಾಗದಲ್ಲಿ ಇರುವ ಪೆÇೀವೆಲ್ ಸರೋವರದಲ್ಲಿ 28 ಮಿಲಿಯ ಎಕರೆ-ಅಡಿ ನೀರು ಹಿಡಿಯುತ್ತದೆ. ಇದು ಹೂವರ್ ಕಟ್ಟೆಯ ಮೇಲುಗಡೆ 370 ಮೈಲು ದೂರದಲ್ಲಿದೆ. ಎರಡು ಕಟ್ಟೆಗಳಿಗೂ ನಡುವೆ ಕಾಲೊರ್ಯಾಡೊ ನದಿಯ ಅದ್ಭುತವಾದ ಗ್ರ್ಯಾಂಡ್ ಕ್ಯಾನನ್ ಇದೆ. 

	ಪ್ರಪಂಚದ ಎರಡನೆಯ ದೊಡ್ಡ ಜಲಾಶಯ ಈಜಿಪ್ಟಿನ ಹೊಸ ಆಸ್ವಾನ್ ಕಟ್ಟೆ. ಇದರಲ್ಲಿ 105 ಮಿಲಿಯ ಎಕರೆ-ಅಡಿ ನೀರು ಹಿಡಿಯುತ್ತದೆ. ಮೂರನೆಯ ದೊಡ್ಡ ಜಲಾಶಯ ರಷ್ಯದಲ್ಲಿ ಇರ್ಟೇಫ್ ನದಿಯ ಮೇಲಿನ ಬಕ್ತಾರ್ಮಿನ್‍ಸ್ಕಯ ಕಟ್ಟೆಯ ಹಿಂದಿನದು. ಇದರಲ್ಲಿ 43 ಮಿಲಿಯ ಎಕರೆ-ಅಡಿ ನೀರು ತುಂಬಿದೆ. 

	ಆಫ್ರಿಕದ ಉಗಾಂಡ ಸಂಸ್ಥಾನದಲ್ಲಿ ಬಿಳಿಯ ನೈಲ್ ನದಿಗೆ ಅಡ್ಡ 1854ರಲ್ಲಿ ಕಟ್ಟಿದ ಕಟ್ಟೆ ಮೇಲುಗಡೆ ಇರುವ ವಿಕ್ಟೋರಿಯ ಸರೋವರದ ಆಳವನ್ನು 3 ಅಡಿಯಷ್ಟು ಹೆಚ್ಚಿಸುತ್ತದೆ. ಈ ಸರೋವರ ಸಮುದ್ರಮಟ್ಟದ ಮೇಲೆ 3,711 ಅಡಿ ಎತ್ತರದಲ್ಲಿದೆ. ಸರೋವರದ ವಿಸ್ತೀರ್ಣ 26,000 ಚದರ ಮೈಲು. ನೀರು ಹರಡನ್ನು ತೆಗೆದುಕೊಂಡರೆ ಪ್ರಪಂಚದ ಜಲಾಶಯಗಳಲ್ಲಿ ಇದಕ್ಕೆ ಮೂರನೆಯ ಸ್ಥಾನ ದೊರಕುತ್ತದೆ. ಪ್ರಪಂಚದಲ್ಲಿಯೇ ಅತ್ಯಂತ ಎತ್ತರವಾದ ಇಂಗೌರಿ ಕಟ್ಟೆ ರಷ್ಯದಲ್ಲಿದೆ. ಗರಿಷ್ಠ ಎತ್ತರ 990 ಅಡಿ. ಎತ್ತರದಲ್ಲಿ ಎರಡನೆಯದಾದ ಕಾಂಕ್ರೀಟಿನ ಭಾರದ ಗ್ರ್ಯಾಂಡ್ ಡಿಕ್ಸೆನ್ ಕಟ್ಟೆ ಸ್ವಿಟ್ಸರ್ಲೆಂಡಿನಲ್ಲಿದೆ. ಗರಿಷ್ಠ ಎತ್ತರ 940 ಅಡಿ. ಎತ್ತರದಲ್ಲಿ ಮೂರನೆಯದಾದ ಮಾವೊಸಿನ್ ಕಮಾನಿನ ಕಟ್ಟೆಯೂ ಸ್ವಿಟ್ಸರ್ಲೆಂಡಿನಲ್ಲಿದೆ. ಇದರ ಎತ್ತರ 880 ಅಡಿ. ಇಟಲಿಯ ವೈಯಂಟ್ ಕಟ್ಟೆಯ ಎತ್ತರ 870 ಅಡಿ. ಐದನೆಯ ಪಂಜಾಬಿನ ಭಾಕ್ರ ಕಾಂಕ್ರೀಟಿನ ಕಟ್ಟೆಯ ಎತ್ತರ 740 ಅಡಿ. ಉದ್ದವನ್ನೂ ಗಾತ್ರವನ್ನೂ ಲೆಕ್ಕಕ್ಕೆ ತೆಗೆದುಕೊಂಡರೆ ಮಿಸೂರಿಯ ಪೆÇೀರ್ಟ್‍ಪೆಕ್ ಮಣ್ಣಿನ ಕಟ್ಟೆ ಎಲ್ಲಕ್ಕಿಂತಲೂ ದೊಡ್ದದು. ಇದರ ಉದ್ದ 4 ಮೈಲು. ಎತ್ತರ 230 ಅಡಿ. ಈ ಏರಿಯಲ್ಲಿ 128 ಮಿಲಿಯನ್ ಘನ ಗಜ ಮಣ್ಣು ಸೇರಿದೆ. ಇದಕ್ಕೆ ಪ್ರತಿಯಾಗಿ ಫ್ರಾನ್ಸಿನ ಲಗೇಜ್ ಕಟ್ಟೆ ಅತ್ಯಂತ ತೆಳುವಾದದ್ದು. ವಿದ್ಯುತ್ ಉತ್ಪಾದನೆಗಾಗಿ ಕಟ್ಟಿದ ಈ ಕಟ್ಟೆಯ ಉದ್ದ ಮೇಲುಗಡೆ 470 ಅಡಿ, ಎತ್ತರ 125 ಅಡಿ. ಅಗಲ ಕೆಳಗಡೆ ಕೇವಲ 8 1/2 ಅಡಿಯಿಂದ ಮೇಲಕ್ಕೆ 4 ಅಡಿಗೆ ತೇಲುತ್ತದೆ. ಮಣ್ಣಿನ ಕಟ್ಟೆಗಳಲ್ಲಿ ಅತ್ಯಂತ ಎತ್ತರವಾದ ಏರಿ ಕ್ಯಾಲಿಫೆÇೀರ್ನಿಯದ ಟ್ರಿನಿಟಿ ಕಟ್ಟೆ. ಇದರ ಎತ್ತರ 538 ಅಡಿ. ಇದರಲ್ಲಿ 33 ಮಿಲಿಯನ್ ಘನ ಗಜ ಮಣ್ಣು ಸೇರಿದೆ. ಮಿಸೂರಿ ನದಿಯ ಮೇಲಿನ ಓಹೆ ಏರಿಯಲ್ಲಿ ಮಣ್ಣಿನ ಕೆಲಸ ಟ್ರಿನಿಟಿ ಕಟ್ಟೆಗಿಂತ ಹೆಚ್ಚು-91 ಮಿಲಿಯನ್ ಘನಗಜ. ಈ ಕಟ್ಟೆಯ ಎತ್ತರ 242 ಅಡಿ. ಉದ್ದ 9,360 ಅಡಿ. 1965ರಲ್ಲಿ ಮುಗಿದ ಟೆಕ್ಲಾಸಿನ ಬಾಸ್ಕ್ ಕಟ್ಟೆಯ ಉದ್ದ 5 ಮೈಲು. ಕೆನಡದ ಸಸ್ಕ್ಯಾಚವನ್ ಕಟ್ಟೆಯ ಉದ್ದ 3 ಮೈಲು. 								(ಎಚ್.ಸಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ